ಪದ್ಮಭೂಷಣ ಪ್ರಶಸ್ತಿಯನ್ನು ಕರ್ನಾಟಕ ಜನರಿಗೆ ಅರ್ಪಿಸಿದ ಅನಂತ್ ನಾಗ್
- ಸಂಪಾದಕೀಯ
- Jan 26
- 1 min read
ಪದ್ಮಭೂಷಣ ಪ್ರಶಸ್ತಿಯನ್ನು ಕರ್ನಾಟಕ ಜನರಿಗೆ ಅರ್ಪಿಸಿದ ಅನಂತ್ ನಾಗ್

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂಬುದು ಹಲವು ವರ್ಷಗಳ ಆಗ್ರಹವಾಗಿತ್ತು. ಪ್ರತಿ ಬಾರಿ ಪದ್ಮ ಪ್ರಶಸ್ತಿಗಳ ಘೊಷಣೆ ಆದಾಗಲೂ ಸಹ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂಬ ಕೂಗು ಕರ್ನಾಟಕದಿಂದ ಏಳುತ್ತಿತ್ತು. ಕೊನೆಗೆ ಈ ವರ್ಷ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪದ್ಮ ಪ್ರಶಸ್ತಿ ದೊರಕಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅನಂತ್ ನಾಗ್, ಪ್ರಶಸ್ತಿಯನ್ನು ಕರ್ನಾಟಕದ ಜನರಿಗೆ ಅರ್ಪಿಸಿದ್ದಾರೆ.
ಪ್ರಶಸ್ತಿ ಘೋಷಣೆಯಾದ ಬಳಿಕ ಮಾತನಾಡಿರುವ ಅನಂತ್ ನಾಗ್, ‘ಈ ಪ್ರಶಸ್ತಿಯನ್ನು ನಾನು ಕರ್ನಾಟಕದ ಜನರಿಗೆ ಅರ್ಪಿಸುತ್ತೇನೆ’ ಎಂದಿದ್ದಾರೆ. ಪ್ರಶಸ್ತಿ ಘೋಷಣೆಯಾದ ಬಳಿಕ ಒಂದು ರೀತಿಯ ನಿರಾಳ ಭಾವ ನನ್ನಲ್ಲಿ ಮೂಡಿತು. ನನಗಾಗಿ ಇಷ್ಟು ವರ್ಷ ನನ್ನನ್ನು ಬೆಂಬಲಿಸಿದ ಜನರಿಗೆ ಕೊನೆಗೂ ಸಂತೋಷವಾಗಲಿದೆ ಎಂದೆನಿಸಿತು’ ಎಂದಿದ್ದಾರೆ. ‘ನನಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಜನ ಒತ್ತಾಯಿಸುತ್ತಲೇ ಬಂದಿದ್ದರು. ಇಂಥಹಾ ಚಳವಳಿಗಳು ಎಷ್ಟು ಕಾಲ ಇರುತ್ತವೆ? ಎಂದು ನನಗೆ ಅನಿಸಿತ್ತು. ಆದರೆ ಜನರ ಬೆಂಬಲ ಕೊನೆಯಾಗಲೇ ಇಲ್ಲ’ ಎಂದಿದ್ದಾರೆ ಅನಂತ್ ನಾಗ್.
ಮೋದಿ ಅವರಿಗೂ ಧನ್ಯವಾದ ಹೇಳಿರುವ ಅನಂತ್ ನಾಗ್, ‘ಪ್ರಶಸ್ತಿಗಳ ಆಯ್ಕೆಯಲ್ಲಿ ಜನರ ಅಭಿಪ್ರಾಯವನ್ನೂ ಪಡೆಯುವ ಪದ್ಧತಿ ಆರಂಭವಾಗಿದ್ದರಿಂದಲೇ ಇದು ಸಾಧ್ಯವಾಯಿತು. ಇದಕ್ಕೆ ಮೋದಿ ಅವರಿಗೆ ಧನ್ಯವಾದ ಹೇಳಲೇ ಬೇಕು’ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ನಟನೆಯ ಆರಂಭದ ದಿನಗಳನ್ನು ನೆನಪು ಮಾಡಿಕೊಂಡ ಅನಂತ್ ನಾಗ್, ‘ನಾನು ನಾಟಕಗಳಲ್ಲಿ ನಟಿಸಲು ಆರಂಭಿಸಿದಾಗ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದೆ. ಬರುವ ಸಂಬಳದಿಂದ ಎಲ್ಲವೂ ನಡೆಯುತ್ತಿತ್ತು. ಆದರೆ ಸಿನಿಮಾಕ್ಕೆ ಸೇರಿಕೊಂಡ ಮೇಲೆ ಹಣ ಬೇಕೇ ಬೇಕಾಯ್ತು. ಸಂಭಾವನೆಯೇ ನನ್ನ ಮೊದಲ ಆದ್ಯತೆ ಆಗಿತ್ತು ಆ ಸಂದರ್ಭದಲ್ಲಿ’ ಎಂದಿದ್ದಾರೆ ಅನಂತ್ ನಾಗ್.
1973 ರಿಂದಲೂ ಸಿನಿಮಾಗಳಲ್ಲಿ ಅನಂತ್ ನಾಗ್ ನಟಿಸುತ್ತಿದ್ದಾರೆ. ಕನ್ನಡ ಮಾತ್ರವೇ ಅಲ್ಲದೆ ಹಿಂದಿ, ತೆಲುಗು, ಮಲಯಾಳಂ, ತಮಿಳು, ಇಂಗ್ಲೀಷ್, ಮರಾಠಿ, ಬೆಂಗಾಳಿ ಸಿನಿಮಾಗಳಲ್ಲಿ ಅನಂತ್ ನಾಗ್ ನಟಿಸಿದ್ದಾರೆ. ನಾಲ್ಕು ಬಾರಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಅನಂತ್ ನಾಗ್ ಪಡೆದಿದ್ದಾರೆ. ಆರು ಬಾರಿ ಫಿಲಂ ಫೇರ್ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.
Comments