ತೆಂಗು ಕಾರ್ಮಿಕರಿಗೆ ರಕ್ಷಣೆ ನೀಡಲಿದೆ ಕೇರಾ ಸುರಕ್ಷಾ ವಿಮಾ ಯೋಜನೆ ; ಪ್ರೀಮಿಯಂ ಹಾಗೂ ಪರಿಹಾರ ದರ ವಿವರ ಇಲ್ಲಿದೆ...
- ಸಂಪಾದಕೀಯ
- Jan 23
- 1 min read
ತೆಂಗು ಕಾರ್ಮಿಕರಿಗೆ ರಕ್ಷಣೆ ನೀಡಲಿದೆ ಕೇರಾ ಸುರಕ್ಷಾ ವಿಮಾ ಯೋಜನೆ ; ಪ್ರೀಮಿಯಂ ಹಾಗೂ ಪರಿಹಾರ ದರ ವಿವರ ಇಲ್ಲಿದೆ...

ಹಾಸನ : ತೆಂಗಿನ ಮರ ಏರುವ ಕಾರ್ಮಿಕರಿಗೆ ಭವಿಷ್ಯದ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಕೇರಾ ಸುರಕ್ಷಾ ವಿಮಾ ಯೋಜನೆ ಜಾರಿಗೊಳಿಸಿದ್ದು, ಇದನ್ನು ಅನುಷ್ಠಾನಕ್ಕೆ ತರಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಹಾಸನ ಜಿಲ್ಲೆಯಲ್ಲಿ ಸಾವಿರಾರು ಮಂದಿ ತೆಂಗಿನ ಮರ ಏರಿ, ತೆಂಗಿನ ಪದಾರ್ಥಗಳನ್ನು ಕೆಳಗೆ ಇಳಿಸುವ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮರ ಏರುವ ವೇಳೆ ಸಂಭವಿಸುವ ಅವಘಡದಿಂದ ಸಾಕಷ್ಟು ತೊಂದರೆಯಾಗಲಿದೆ. ಇಂತಹ ಸಂದರ್ಭದಲ್ಲಿಇವರಿಗೆ ನೆರವಾಗುವ ಸಂಬಂಧ ಕೇಂದ್ರ ಸರ್ಕಾರ ಕೇರಾ ಸುರಕ್ಷಾ ಯೋಜನೆಯನ್ನು ಜಾರಿ ಮಾಡಿದೆ. ಈ ಬಗ್ಗೆ ತೆಂಗು ಕಾರ್ಮಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೇಲೂರು ತಾಲೂಕಿನ ಬಹುತೇಕ ಪ್ರದೇಶಗಳು ಮಲೆನಾಡು ಭಾಗವಾಗಿದ್ದು, ಜಿಲ್ಲೆಯಲ್ಲಿ40,000 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗಿದೆ. ಕಾಫಿ ಕೊಯ್ಲುಮುಗಿದ ಬಳಿಕ ನೆರಳಿನಿಂದ ಕೂಡಿರುವ ತೋಟಗಳನ್ನು ಮರಕಸಿ ಮಾಡಿಸಲು ಮಾಲೀಕರು ನಿರ್ಧರಿಸಿದ್ದಾರೆ. ಈ ವೇಳೆ ಜೀವವನ್ನು ಲೆಕ್ಕಿಸದೇ ದೈತ್ಯ ಮರಗಳನ್ನು ಏರಲು ಕಾರ್ಮಿಕರು ಮುಂದಾಗುತ್ತಾರೆ. ಇಂತಹವರಿಗೆ ವಿಮೆ ಸೌಲಭ್ಯ ನೆರವಾಗಲಿದೆ.
ಏನಿದು ಕೇರಾ ಸುರಕ್ಷಾ ವಿಮೆ..? : ಕೇರಾ ಸುರಕ್ಷಾ ವಿಮೆಯು ತೆಂಗು ಅಭಿವೃದ್ಧಿ ಮಂಡಳಿ, ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಸಚಿವಾಲಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ತೆಂಗು ಬೆಳೆಯುವ ರಾಜ್ಯಗಳು ಸೇರಿದಂತೆ ದೇಶಾದ್ಯಂತ ಜಾರಿಗೆ ತಂದಿರುವ ವಿಮಾ ಯೋಜನೆ. ತೆಂಗಿನ ಮರವನ್ನೇರಿ ಎಳನೀರು, ತೆಂಗಿನಕಾಯಿ ಕೀಳುವವರಿಗೆ, ನೀರಾ ತಂತ್ರಜ್ಞರಿಗೆ, ತೆಂಗಿನ ಕಾಯಿ ಕೊಯ್ಲುಮಾಡುವವರಿಗೆ, ಹೈಬ್ರಿಡೈನೇಶನ್ ಕೆಲಸಗಾರರಿಗೆ, ಪ್ರಾತ್ಯಕ್ಷಿಕೆ ಹಾಗೂ ಬೀಜ ಉತ್ಪಾದಿಸುವ ಫಾಮ್‌ರ್‍ಗಳಲ್ಲಿಕಾರ‍್ಯ ನಿರ್ವಹಿಸುವವರಿಗೆ, ತೆಂಗು ಕೌಶಲ ತರಬೇತಿ ಪಡೆಯುವ ನಾನಾ ಕಾರ್ಮಿಕರಿಗೆ ಸಮಗ್ರ ವಿಮಾ ರಕ್ಷಣೆ ದೊರೆಯಲಿದೆ.
ಹೇಗೆ ಸಿಗಲಿದೆ ಪರಿಹಾರ? : ಕೇರಾ ವೈಯಕ್ತಿಕ ಅಪಘಾತ ವಿಮೆಯಾಗಿದ್ದು ವಾರ್ಷಿಕ ಪ್ರೀಮಿಯಂ 956 ರೂ. ಆಗಿದೆ. ತೆಂಗು ಅಭಿವೃದ್ಧಿ ಮಂಡಳಿ 717 ರೂ.ಗಳನ್ನು ಪಾವತಿಸಲಿದ್ದು, ಕಾರ್ಮಿಕರು 239 ರೂ.ಗಳನ್ನು ವಾರ್ಷಿಕ ಕಂತಿನ ರೂಪದಲ್ಲಿ ಪಾವತಿಸಬೇಕಾಗುತ್ತದೆ. ತೆಂಗಿನ ಮರದಿಂದ ಕಾಯಿ ಕೀಳುವಾಗ ಆಯತಪ್ಪಿ ಬಿದ್ದು ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೆ ಗರಿಷ್ಠ 7 ಲಕ್ಷ ರೂ.ವರೆಗೆ ವಿಮಾ ಪರಿಹಾರ ಸಿಗಲಿದೆ.
ವಿಮೆಯಡಿ ದೊರಕುವ ಪರಿಹಾರ
1) ಸಾವು/ಶಾಶ್ವತ ಅಂಗವೈಕಲ್ಯ - 7 ಲಕ್ಷ ರೂ.
2) ಭಾಗಶಃ ಅಂಗವೈಕಲ್ಯ -3.5 ಲಕ್ಷ.ರೂ
3) ಅಂತ್ಯಕ್ರಿಯೆಗಾಗಿ - 5500 ರೂ.
4) ಅಪಘಾತ/ ಸಾವಿನ ಸಂದರ್ಭ -3500 ರೂ.
ಎಷ್ಟು ಪಾವತಿಸಬೇಕು..?
1) ವಾರ್ಷಿಕ ಪ್ರೀಮಿಯಂ - 956 ರೂ.
2) ತೆಂಗು ಅಭಿವೃದ್ಧಿ ಮಂಡಳಿ ಕಡೆಯಿಂದ- 717 ರೂ.
3) ಕಾರ್ಮಿಕರ ಕಡೆಯಿಂದ - 239 ರೂ.
コメント