ಪ್ರಯಾಗ್ ರಾಜ್ : ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದ ನಾಲ್ವರು ಬಲಿ
- ಸಂಪಾದಕೀಯ
- Jan 29
- 1 min read
ಪ್ರಯಾಗ್ ರಾಜ್ : ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದ ನಾಲ್ವರು ಬಲಿ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜ. 29ರಂದು ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಿವಾಸಿಗಳಾದ ಜ್ಯೋತಿ ಹತ್ತರವಾಠ (50) ಮತ್ತು ಮೇಘಾ (18) ಎಂಬ ತಾಯಿ ಮಗಳು ಹಾಗೂ ಅರುಣಾ ಕೋಪರ್ಡೆ ಮೃತಪಟ್ಟಿದ್ದಾರೆ. ಇವರಿಬ್ಹರೂ ಬೆಳಗಾವಿಯ ವಡಗಾವಿ ನಿವಾಸಿಗಳಾಗಿದ್ದು ಇದೇ ವಾರದ ಆರಂಭದಲ್ಲಿ ಬೆಳಗಾವಿಯಿಂದ ಪ್ರಯಾಗ್ ರಾಜ್ ಗೆ ಕುಂಭಮೇಳಕ್ಕಾಗಿ ತೆರಳಿದ್ದ ಟೂರಿಸ್ಟ್ ಬಸ್ಸಿನಲ್ಲಿ ಪ್ರಯಾಗ್ ರಾಜ್ ಗೆ ತೆರಳಿದ್ದರು.
ಜ. 29ರಂದು ಮೌನಿ ಅಮಾವಾಸ್ಯೆಯಾಗಿದ್ದರಿಂದ ಈ ಪುಣ್ಯದಿನದಂದು ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಕೋಟ್ಯಾನುಕೋಟಿ ಜನರು ಆಗಮಿಸಿದ್ದರು. ಆ ಸಂದರ್ಭದಲ್ಲಿ ನೂಕು ನುಗ್ಗಲು ಸಂಭವಿಸಿತ್ತು. ಜನರ ಕಾಲ್ತುಳಿತಕ್ಕೆ ಸಿಲುಕಿ ನೂರಾರು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಜ್ಯೋತಿ ಹಾಗೂ ಮೇಘಾ ಕೂಡ ಸೇರಿದ್ದರು. ಗಾಯಗೊಂಡವರೆಲ್ಲರನ್ನೂ ಪ್ರಯಾಗ್ ರಾಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿಕರಾದ ಗುರುರಾಜ ಹುದ್ದಾರ ತಿಳಿಸಿದ್ದಾರೆ.
ಇದೇ ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಬೆಳಗಾವಿಯವರಾದ ಅರುಣಾ ಕೋಪರ್ಡೆ (61), ಮಹಾದೇವಿ ಹಣಮಂತ ಬಾವಣೂರ (48) ಅವರೂ ಮೃತಪಟ್ಟಿದ್ದಾರೆ. ಇವರು ಬೆಳಗಾವಿಯ ಶೆಟ್ಟಿಗಲ್ಲಿಯ ನಿವಾಸಿಗಳು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿನಂತಿ : ಪ್ರಯಾಗ್ ರಾಜ್ ನಲ್ಲಿ ಸಂಭವಿಸಿರುವ ಕಾಲ್ತುಳಿತ ಘಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದಲೇ ಈ ದುರ್ಘಟನೆ ಉಂಟಾಗಿದೆ. ಜನರು ಸ್ವಲ್ಪ ಸಾವಧಾನದಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.
ಅತ್ತ, ಪುಣ್ಯಸ್ನಾನಕ್ಕಾಗಿ ದೇಶದ ಮೂಲೆಮೂಲೆಗಳಿಂದ ಆಗಮಿಸಿರುವ ಸಾವಿರಾರು ಸಾಧುಗಳಿಗೂ ಮನವಿ ಮಾಡಿರುವ ಯೋಗಿ, ಸ್ನಾನಕ್ಕೆ ಬಂದಿರುವ ಅಖಾಡಾಗಳಲ್ಲಿ ಮೊದಲು ಸಂತರು ಸ್ನಾನ ಮಾಡಲಿ, ಆನಂತರ ಅಖಾಡಾ ಸಾಧುಗಳು ಸ್ನಾನ ಮಾಡಲಿ ಎಂದಿರುವ ಅವರು ಯಾರೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದ್ದಾರೆ. ಅತ್ತ, ಕುಂಭಮೇಳಕ್ಕೆತೆರಳುವ ಮಾರ್ಗಗಳಾದ ನಾಗ್ ವಾಸುಕಿ ಹಾಗೂ ಸಂಗಮ್ ಮಾರ್ಗ ಗಳು ಅಪಾರ ಜನದಟ್ಟಣೆಯಿಂದ ತುಂಬಿ ಹೋಗಿವೆ. ಎಲ್ಲೆಲ್ಲೂ ಜನರೇ ತುಂಬಿ ತುಳುಕುತ್ತಿರುವುದರಿಂದ ನಿಲ್ಲಲೂ ಜಾಗವಿಲ್ಲದಂತಾಗಿದೆ.
ಸಹಾಯವಾಣಿ : ಪ್ರಯಾಗ್ ರಾಜ್ ನಲ್ಲರುವ ಕನ್ನಡಿಗರ ಬಗ್ಗೆ ಅವರ ಸಂಬಂಧಿಕರು ಆತಂಕಗೊಂಡಿರುವುದನ್ನು ಪರಿಗಣಿಸಿ ರಾಜ್ಯ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ. 080-22340676 ಈ ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ತಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದಾಗಿದೆ.
Comments