ಹೊಸ ವರ್ಷದ ಆರಂಭದಲ್ಲೇ ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ ; ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
- ಸಂಪಾದಕೀಯ
- Jan 9
- 1 min read
ಹೊಸ ವರ್ಷದ ಆರಂಭದಲ್ಲೇ ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ ; ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

2025-26ನೇ ಸಾಲಿಗೆ ಪ್ರತಿ ಯೂನಿಟ್‌ಗೆ ಸರಾಸರಿ 0.70 ರೂ. ದರ ಏರಿಕೆ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮೆಸ್ಕಾಂ ಸಲ್ಲಿಸಿದ್ದು, ಈ ಮೂಲಕ ಹೊಸ ವರ್ಷದ ಆರಂಭದಲ್ಲೇ ಮೆಸ್ಕಾಂ ದರ ಏರಿಕೆಯ ಸುಳಿವು ನೀಡಿದೆ.
ಪ್ರಸಕ್ತ ಚಾಲ್ತಿಯಲ್ಲಿರುವ ದರಗಳಿಂದ ಮೆಸ್ಕಾಂ ತನ್ನ ಕಂದಾಯ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬುದು ದರ ಏರಿಕೆ ಬೇಡಿಕೆಗೆ ಮೆಸ್ಕಾಂ ನೀಡಿರುವ ಕಾರಣ. ದರ ಏರಿಕೆ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಈಗ ಯೂನಿಟ್‌ಗೆ ಸರಾಸರಿ ಸರಬರಾಜು ವೆಚ್ಚ 9.23 ರೂ. ಇದ್ದು, ಪ್ರಸಕ್ತ ದರಗಳಿಂದ ಸರಾಸರಿ ವಸೂಲಾತಿ ಯೂನಿಟ್‌ಗೆ 8.53 ರೂ. ಆಗಿದೆ. ಹೀಗಾಗಿ ಯೂನಿಟ್‌ಗೆ 0.70 ರೂ. ಕಂದಾಯ ಕೊರತೆ ಆಗುತ್ತಿದೆ ಎಂಬುದು ಮೆಸ್ಕಾಂ ವಾದ.
2023-24ರ ಅಂತ್ಯಕ್ಕೆ ಪ್ರಸಕ್ತ ವಿದ್ಯುತ್ ದರಗಳಿಂದ 5,942.73 ಕೋ.ರೂ. ಕಂದಾಯ ಬರಲಿದೆ. ಆದರೆ ವಾರ್ಷಿಕ ಕಂದಾಯ 6,310.39 ಕೋ.ರೂ. ಆಗಿದ್ದು, ಅಗತ್ಯ ಕಾರಣದಿಂದ 367.66 ಕೋ.ರೂ ಕಂದಾಯ ಕೊರತೆಯನ್ನು ಮೆಸ್ಕಾಂ ಉಲ್ಲೇಖೀಸಿದೆ. ಇದರಂತೆ ಮುಂದಿನ ಸಾಲಿನಲ್ಲಿ (2025-26) ಕಂದಾಯ 5,850.81 ಕೋ.ರೂ ಅಂದಾಜಿಸಲಾಗಿದ್ದು, 5,961.63 ಕೋ.ರೂ. ಕಂದಾಯ ಅಗತ್ಯವನ್ನು ಲೆಕ್ಕ ಹಾಕಲಾಗಿದೆ. ಇದರಂತೆ 110.82 ಕೋ.ರೂ ಕಂದಾಯ ಕೊರತೆ ಅಂದಾಜಿಸಿ 0.70 ರೂ. ದರ ಏರಿಕೆಯ ವಾದವನ್ನು ಮಂಡಿಸಿದೆ.
3 ವರ್ಷದ ಏರಿಕೆಗೆ ಪ್ರಸ್ತಾವನೆ : ಇದೇ ಮೊದಲ ಬಾರಿಗೆ ಮೆಸ್ಕಾಂ ಬಹುವಾರ್ಷಿಕ (3 ವರ್ಷದ) ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾವವನ್ನು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದೆ.ಇದರಂತೆ 2025-26ಕ್ಕೆ ಯುನಿಟ್‌ಗೆ0.70 ರೂ. ಏರಿಕೆ ಪ್ರಸ್ತಾವವಿರುವ ಹಾಗೆಯೇ 2026-27ಕ್ಕೆ 0.37 ರೂ. ಹಾಗೂ 2027-28ಕ್ಕೆ 0.54 ರೂ. ಏರಿಕೆಯ ಪ್ರಸ್ತಾವ ಮಾಡಲಾಗಿದೆ.ಪ್ರಸ್ತಾವ ಒಟ್ಟಾಗಿ ಸಲ್ಲಿಸಿದರೂ ಮೆಸ್ಕಾಂನ ಪ್ರತಿವರ್ಷದ ಲಾಭ, ನಷ್ಟ ಹಾಗೂ ನಿರ್ವಹಣೆ ಪರಾಮರ್ಶಿಸಿ ಪ್ರಸ್ತಾವಿತ ದರಕ್ಕೆ ಏರಿಸುವ ಅವಕಾಶ ಆ ಕಾಲಕ್ಕೆ ಇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದರ ಹೆಚ್ಚಳ ಅಗತ್ಯ
ವಿದ್ಯುತ್ ದರ ಹೆಚ್ಚಳದ ಪರಿಷ್ಕರಣೆ ಅಗತ್ಯವಾಗಿದೆ. ಈ ಬಗ್ಗೆ ಮೆಸ್ಕಾಂ ಹೊಸ ಪ್ರಸ್ತಾವವನ್ನು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದೆ.
-ಜಯಕುಮಾರ್ ಆರ್.,
ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ
Comments