top of page

ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

Updated: Feb 13

ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ree

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ರಾಜ್ಯ ಸರ್ಕಾರ ಮಂಡಿಸಿದ್ದ ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.

ಆರು ತಿಂಗಳುಗಳ ಕಾಲ ಈ ಸುಗ್ರೀವಾಜ್ಞೆ ಜಾರಿಯಲ್ಲಿರಲಿದ್ದು, ಸದ್ಯ ಕೆಲವು ಉಪಯುಕ್ತ ಬದಲಾವಣೆಗಳನ್ನು ಸೂಚಿಸುವ ಮೂಲಕ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಮ್ಮತಿ ಸೂಚಿಸಿದ್ದು, ಮಸೂದೆಯನ್ನು ಮಂಡಿಸಲು ರಾಜ್ಯ ಸರ್ಕಾರಕ್ಕೆ ಆರು ತಿಂಗಳ ಕಾಲಾವಕಾಶ ನೀಡಿದ್ದಾರೆ.

"ಅನಿಯಂತ್ರಿತ ಮತ್ತು ನೋಂದಾಯಿತವಲ್ಲದ ಎಂಎಫ್‌ಐಗಳು ಮತ್ತು ಮನಿ ಲೆಂಡಿಂಗ್ ಏಜೆನ್ಸಿಗಳು ಸಾಲಗಾರರಿಗೆ ಅನಗತ್ಯ ಕಿರುಕುಳ ನೀಡುವುದನ್ನು ತಪ್ಪಿಸಲು ಈ ಸುಗ್ರೀವಾಜ್ಞೆ ಅವಶ್ಯಕ" ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅಭಿಪ್ರಾಯಪಟ್ಟಿದ್ದಾರೆ.

"ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳು ಅಧಿಕ ಬಡ್ಡಿಯ ಅನಗತ್ಯ ಕಷ್ಟಗಳಿಂದ ಪಾರು ಮಾಡಲು ಈ ಸುಗ್ರೀವಾಜ್ಞೆ ನೆರವಾಗಲಿದ್ದು, ಮುಂದಿನ ಆರು ತಿಂಗಳುಗಳವರೆಗೆ ರಾಜ್ಯದಲ್ಲಿ ಈ ಸುಗ್ರೀವಾಜ್ಞೆ ಜಾರಿಯಲ್ಲಿರಲ್ಲಿದೆ. ಸುಗ್ರೀವಾಜ್ಞೆಯು ಅತ್ಯುತ್ತಮ ಉದ್ದೇಶಗಳನ್ನು ಹೊಂದಿದ್ದರೂ ಸಹ ಕಾನೂನು ಮತ್ತು ಸುಗ್ರೀವಾಜ್ಞೆಯ ಸಾಮಾಜಿಕ ಪ್ರಭಾವವನ್ನು ವಿವರವಾಗಿ ಚರ್ಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತರಲು ಬಯಸಿರುವ ಸುಗ್ರೀವಾಜ್ಞೆಗೆ ಕೆಲವು ಅಗತ್ಯ ಬದಲಾವಣೆ ತರಲು ನಾನು ಬಯಸುತ್ತೇನೆ" ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಕಚೇರಿ "ಕರ್ನಾಟಕ ಸರ್ಕಾರವು ಸಚಿವ ಸಂಪುಟ ಸಭೆಯ ಮೂಲಕ ನಿರ್ಧರಿಸಿದ ಕಿರುಬಂಡವಾಳ ನಿಯಮಗಳಿಗೆ ಸಂಬಂಧಿಸಿದಂತೆ ರಾಜಭವನಕ್ಕೆ ಕಳುಹಿಸಲಾದ ಸುಗ್ರೀವಾಜ್ಞೆಗೆ ಕರ್ನಾಟಕ ರಾಜ್ಯಪಾಲರು ಸಹಿ ಹಾಕಿದ್ದಾರೆ. ಇದಕ್ಕೂ ಮುನ್ನ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಕಳುಹಿಸಿದ್ದು, ಅದರಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿದ್ದರು. ಕರ್ನಾಟಕ ಸರ್ಕಾರವು ರಾಜಭವನದಿಂದ ಕೇಳಿದ ಅಗತ್ಯ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ಸುಗ್ರೀವಾಜ್ಞೆಯನ್ನು ಮತ್ತೆ ಕಳುಹಿಸಿಕೊಟ್ಟಿತ್ತು. ಅದರಂತೆ ಫೆ.12 ರಂದು ಕರ್ನಾಟಕ ರಾಜ್ಯಪಾಲರು ಕರ್ನಾಟಕದಲ್ಲಿ ಮೈಕ್ರೊ ಫೈನಾನ್ಸ್ ಸಂಬಂಧಿತ ಸಮಸ್ಯೆಗಳನ್ನು ನಿಗ್ರಹಿಸಲು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ"‌ ಎಂದು ಸ್ಪಷ್ಟಪಡಿಸಿದೆ.


ರಾಜ್ಯಪಾಲರು ಸೂಚಿಸಿದ ಬದಲಾವಣೆಗಳು

1) ಆರ್.ಬಿ.ಐ ಅಡಿ ನೋಂದಾಯಿತ,ಸಹಕಾರಿ, ಸಣ್ಣ ಹಣಕಾಸು ಸಂಸ್ಥೆಗಳಿಗೆ ವ್ಯಾಪಾರ ವ್ಯವಹಾರಕ್ಕೆ ಯಾವುದೇ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು.

2) ಈಗಾಗಲೇ ಸಾಲ ನೀಡಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿದಾತರು ಈ ಸುಗ್ರೀವಾಜ್ಞೆಯಿಂದ ಅವರ ಸಾಲ,ಹಾಗೂ ಬಡ್ಡಿ ವಸೂಲಾತಿಗೆ ಅಡ್ಡಿಯಾಗಬಹುದು ಮತ್ತು ಕಾನೂನು ಹೋರಾಟಕ್ಕೆ ಆಸ್ಪದ ಕಲ್ಪಿಸಬಹುದು.

3) ಸಂವಿಧಾನದ ಕಲಂ 19 ಮತ್ತು 32 ಅಡಿ ನೈಸರ್ಗಿಕ ನ್ಯಾಯ ಪಡೆಯಲು ಅವಕಾಶವಿದೆ. ಹೀಗಾಗಿ ಅವರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದಂತೆ‌ ಎಚ್ಚರಿಕೆ ವಹಿಸಬೇಕು.

ಅಷ್ಟೇ ಅಲ್ಲದೆ, ಆದಷ್ಟು ಶೀಘ್ರವಾಗಿ ವಿಧಾನ ಮಂಡಲದಲ್ಲಿ ವಿಧೇಯಕ ಮಂಡಿಸಿ ಸಮಗ್ರವಾಗಿ ಚರ್ಚಿಸಿ ವಿಧೇಯಕ ತರುವಂತೆಯೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೂಚಿಸಿದ್ದಾರೆ.


ree

Comments


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page