ಪದ್ಮ ಪ್ರಶಸ್ತಿಗೆ ಭಾಜನರಾದ ಚಿತ್ರರಂಗದ ಸಾಧಕರ ಪಟ್ಟಿ
- ಸಂಪಾದಕೀಯ
- Jan 26
- 2 min read
ಪದ್ಮ ಪ್ರಶಸ್ತಿಗೆ ಭಾಜನರಾದ ಚಿತ್ರರಂಗದ ಸಾಧಕರ ಪಟ್ಟಿ

ಕೇಂದ್ರ ಸರ್ಕಾರ ಇಂದು (ಜನವರಿ 25) ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. 7 ಮಂದಿಗೆ ಪದ್ಮವಿಭೂಷಣ, 119 ಮಂದಿಗೆ ಪದ್ಮ ಭೂಷಣ ಹಾಗೂ 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ಹಲವರನ್ನು ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು. ಕನ್ನಡ ಚಿತ್ರರಂದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪದ್ಮ ಪ್ರಶಸ್ತಿಗೆ ಭಾಜನರಾದ ಸಿನಿಮಾ ರಂಗದ ಗಣ್ಯರ ಪಟ್ಟಿ ಇಲ್ಲಿದೆ.
ಅನಂತ್ ನಾಗ್ : ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಮಾತ್ರವೇ ಅಲ್ಲದೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದು, ದಶಕಗಳಿಂದಲೂ ಸಿನಿಮಾ ಮೂಲಕ ಮನೊರಂಜನೆ, ಸಾಮಾಜಿಕ ಸಂದೇಶಗಳನ್ನು ನೀಡುತ್ತಾ ಬಂದಿದ್ದಾರೆ.
ರಿಕ್ಕಿ ಕೇಜ್ : ಕನ್ನಡದ ಕೆಲವು ಸಿನಿಮಾ ಸೇರಿದಂತೆ ಹಲವು ಆಲ್ಬಂಗಳಿಗೆ ಸಂಗೀತ ನೀಡಿರುವ ಕನ್ನಡಿಗ ರಿಕ್ಕಿ ಕೇಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಂದಮೂರಿ ಬಾಲಕೃಷ್ಣ : ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ರಾಜಕಾರಣಿಯೂ ಆಗಿರುವ ಬಾಲಕೃಷ್ಣ ಅವರಿಗೆ ಇದು ಮೊದಲ ಪದ್ಮ ಪ್ರಶಸ್ತಿ. ಕಳೆದ ವರ್ಷ ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಅಜಿತ್ ಕುಮಾರ್ : ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಹಲವು ದಶಕಗಳಿಂದಲೂ ಅವರು ತಮಿಳು ಚಿತ್ರರಂಗದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಇದೀಗ ಅಜಿತ್ ಕುಮಾರ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಶೇಖರ್ ಕಪೂರ್ : ಹಿಂದಿ ಚಿತ್ರರಂಗದ ಜನಪ್ರಿಯ ನಟ, ನಿರ್ಮಾಪಕ, ನಿರ್ದೇಶಕ ಶೇಖರ್ ಕಪೂರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ‘ಮಿಸ್ಟರ್ ಇಂಡಿಯಾ’, ‘ಬ್ಯಾಂಡಿಟ್ ಕ್ವೀನ್’, ‘ಎಲಿಜಿಬೆತ್’ ಇನ್ನೂ ಹಲವು ಖ್ಯಾತ ಸಿನಿಮಾಗಳನ್ನು ಶೇಖರ್ ಕಪೂರ್ ನಿರ್ದೇಶಿಸಿದ್ದಾರೆ.
ಅರಿಜಿತ್ ಸಿಂಗ್ : ಖ್ಯಾತ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ತಮ್ಮ ಅದ್ಭುತ ಧ್ವನಿಯಿಂದಾಗಿ ದೇಶದ ನಂಬರ್ 1 ಗಾಯಕ ಎನಿಸಿಕೊಂಡಿರುವ ಅರಿಜಿತ್ ಸಿಂಗ್ ಹಿಂದಿ ಮಾತ್ರವಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಹಾಡಿದ್ದಾರೆ.
ಶೋಭನಾ : ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಹಿರಿಯ ನಟಿ ಶೋಭನಾಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 1980 ರಲ್ಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟ ಶೋಭನಾ ಆ ನಂತರ ನಾಯಕಿಯಾಗಿ ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಮತಾ ಶಂಕರ್ : ಖ್ಯಾತ ನಟಿ, ನೃತ್ಯಗಾರ್ತಿ ಮಮತಾ ಶಂಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಮಮತಾ ಶಂಕರ್ ಅವರು ಬೆಂಗಾಲಿ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಷ್ಟ್ರಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ. ಅವರು ಬಹಳ ಒಳ್ಳೆಯ ನೃತ್ಯಗಾರ್ತಿ ಸಹ ಹೌದು. ಇನ್ನೂ ಕೆಲವು ನಟರು, ತಂತ್ರಜ್ಞರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
Comments