ಶ್ರೀ ವಿಷ್ಣು ಯುವಶಕ್ತಿ ಮಜ್ಜಾರಡ್ಕದ ಸಂಘಟನಾ ಕಾರ್ಯದರ್ಶಿ ರಾಜೇಶ್ ಮಯೂರ 2024-25ನೇ ಸಾಲಿನ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆ
- ಸಂಪಾದಕೀಯ
- Jan 23
- 2 min read
ಶ್ರೀ ವಿಷ್ಣು ಯುವಶಕ್ತಿ ಮಜ್ಜಾರಡ್ಕದ ಸಂಘಟನಾ ಕಾರ್ಯದರ್ಶಿ ರಾಜೇಶ್ ಮಯೂರ 2024-25ನೇ ಸಾಲಿನ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆ


ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಗೋಳ್ತಿಲ ನಿವಾಸಿ ದಿ| ಕೊರಗಪ್ಪ ರೈ ಹಾಗೂ ಶ್ರೀಮತಿ ಶ್ಯಾಮಲಾ ದಂಪತಿಗಳ ಪುತ್ರ ರಾಜೇಶ್ ಮಯೂರ ರವರು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕೊಡಮಾಡುವ “ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ” ಗೆ ಆಯ್ಕೆಯಾಗಿದ್ದಾರೆ.
ರಾಜೇಶ್ ರವರು ಕಲಾವಿದರು ಮಾತ್ರವಲ್ಲದೇ ಮಜ್ಜಾರಡ್ಕ ಎಂಬ ಪುಟ್ಟ ಊರಿನಲ್ಲಿ ಯುವ ಜನರನ್ನು ಒಗ್ಗೂಡಿಸಿಕೊಂಡು ಶ್ರೀ ವಿಷ್ಣು ಯುವಶಕ್ತಿ ಎಂಬ ಸಂಘಟನೆಯನ್ನು ಕಟ್ಟಿ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುವುದರೊಂದಿಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ದೇಹದಾನದ ವಾಗ್ದಾನವನ್ನೂ ಮಾಡಿದ್ದಾರೆ. ಅದರೊಂದಿಗೆ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಮಕ್ಕಳ ಕುಣಿತ ಭಜನಾ ತಂಡದ ಸಂಘಟಕರು, ಮಜ್ಜಾರಡ್ಕ ಶ್ರೀ ವಿಷ್ಣು ಸಾಂಸ್ಕೃತಿಕ ಸೇವಾ ಸಮಿತಿಯ ಅಧ್ಯಕ್ಷರು, ಅರಿಯಡ್ಕ ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು, ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ, ಪುತ್ತೂರು ಭಾರತ್ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಈ ಎಲ್ಲಾ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಸ್ವಾಮಿ ವಿವೇಕಾನಂದ ಪ್ರಶಸ್ತಿ, ಪುತ್ತೂರು ಯುವಜನ ಒಕ್ಕೂಟದ ವತಿಯಿಂದ ತಾಲೂಕು ಯುವ ಪ್ರಶಸ್ತಿ, ಕರ್ನಾಟಕ ಯುವ ಸಂಘಗಳ ಒಕ್ಕೂಟ(ರಿ.) ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ(ರಿ.) ಮಂಗಳೂರು ಇದರ ವತಿಯಿಂದ ಸಂಘಟನಾ ಕ್ಷೇತ್ರಕ್ಕೆ ಜಿಲ್ಲಾ ಯುವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳು ಇವರ ಸಾಧನೆಯನ್ನು ಅರಸಿ ಬಂದಿವೆ.
ಅದರೊಂದಿಗೆ ಇವರ ನಾಯಕತ್ವದಲ್ಲಿ ಶ್ರೀ ವಿಷ್ಣು ಯುವಶಕ್ತಿ ಸಂಘಟನೆಯು ಕೇಂದ್ರ ಯುವಜನ ಹಾಗೂ ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಹಾಗೂ ನೆಹರೂ ಯುವ ಕೇಂದ್ರ ಮಂಗಳೂರು ಇವರು ಕೊಡಮಾಡುವ ಜಿಲ್ಲಾ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ವತಿಯಿಂದ 2 ಬಾರಿ ಜಿಲ್ಲಾ ಸಾಂಘಿಕ ಯುವ ಪ್ರಶಸ್ತಿ ಗಳಿಸಿದ್ದು,
ಇವರ ಈ ಎಲ್ಲಾ ವೈಯಕ್ತಿಕ ಸಾಧನೆ ಹಾಗೂ ಸಂಘಟನಾತ್ಮಕ ಸಾಧನೆಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟವು ಇವರನ್ನು 2024-25ನೇ ಸಾಲಿನ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜ.27 ರಂದು ಇಟ್ಟಪ್ಪ ದೇವರ ರಂಗ ವೇದಿಕೆ ಹಳ್ಳೂರ ತಾಲೂಕು ಮೂಡಲಗಿ ಜಿಲ್ಲೆ ಬೆಳಗಾವಿ ಇಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಈ ಬಗ್ಗೆ ಮಾತನಾಡಿದ ರಾಜೇಶ್ ಮಯೂರ ರವರು “ನನಗೆ ಸಿಕ್ಕ ಈ ಪ್ರಶಸ್ತಿಯನ್ನು ನಮ್ಮನ್ನಗಲಿದ ಸಂಘಟನೆ ಸದಸ್ಯ ದಿ| ಜಗದೀಶ್ ಕೋಡಿಯಡ್ಕ ಇವರಿಗೆ ಅರ್ಪಿಸುತ್ತೇನೆ. ಹಾಗೂ ನನ್ನನ್ನು ಪ್ರೋತ್ಸಾಹಿಸಿದ ಸಂಘಟನೆಯ ಗೌರವ ಅಧ್ಯಕ್ಷರು ಶ್ರೀ ಒಲೆಮೊಂಡೋವು ಮೋಹನ್ ರೈ ಹಾಗೂ ಸಂಘಟನೆಯ ಗೌರವ ಸಲಹೆಗಾರರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳಿಗೆ, ಸಂಘಟನೆಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಹೇಳಿದರು.

Comments