ಜ.20 ರಂದು ಸರಣಿ ದರೋಡೆ - ಮತ್ತೆ ಬೆಚ್ಚಿಬಿದ್ದ ಕರ್ನಾಟಕ
- ಸಂಪಾದಕೀಯ
- Jan 21
- 1 min read
ಜ.20 ರಂದು ಸರಣಿ ದರೋಡೆ - ಮತ್ತೆ ಬೆಚ್ಚಿಬಿದ್ದ ಕರ್ನಾಟಕ

ಬೆಂಗಳೂರು: ಬೀದರ್ ನಲ್ಲಿ ಎಟಿಎಂಗೆ ಹಣ ತುಂಬಿಸುವ ಸಿಬ್ಬಂದಿಯನ್ನು ಹತ್ಯೆಗೈದು ಲಕ್ಷಾಂತರ ರೂ.ಗಳನ್ನು ದರೋಡೆ ಮಾಡಿದ ಬೆನ್ನಲ್ಲೇ ಮಂಗಳೂರಿನಲ್ಲಿ ಕೋಟೆಕಾರು ಬ್ಯಾಂಕ್ ದರೋಡೆಯಾಗಿತ್ತು. ಈ ಎರಡೂ ಘಟನೆಗಳು ಜನಮಾನಸದಿಂದ ಮಾಸುವ ಮುನ್ನವೇ ಜ. 19 - 20ರ ನಡುವಿನ 24 ಗಂಟೆಗಳಲ್ಲಿ ಮತ್ತೆರಡು ಡಕಾಯಿತಿ ಪ್ರಕರಣಗಳು ನಡೆದಿವೆ. ಇದರಿಂದ ಜನರು ಮತ್ತಷ್ಟು ಬೆಚ್ಚಿ ಬೀಳುವಂತಾಗಿದೆ.
ಮೈಸೂರಿನ ಘಟನೆ : ಜ. 20ರಂದು ಕೇರಳ ಮೂಲದ ಉದ್ಯಮಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಅವರಲ್ಲಿದ್ದ ಒಂದೂವರೆ ಲಕ್ಷ ರೂ. ಹಣದ ಜೊತೆಗೆ ಅವರ ಕಾರನ್ನೂ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಸಮೀಪದಲ್ಲಿ ಈ ಘಟನೆ ನಡೆದಿದೆ. ಕಾರನ್ನು ಅಡಗಟ್ಟಿದ ದರೋಡೆಕಾರರು ಮುಸುಕುಧಾರಿಗಳಾಗಿದ್ದು ಉದ್ಯಮಿಯನ್ನು ಕಾರಿನಿಂದ ಕೆಳಕ್ಕಿಳಿಸಿ ಅವರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಆನಂತರ ಕಾರಿನಲ್ಲಿದ್ದ ಹಣದ ಜೊತೆಗೆ ಕಾರನ್ನೂ ಓಡಿಸಿಕೊಂಡು ಪರಾರಿಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಕೆನರಾ ಬ್ಯಾಂಕ್ ದರೋಡೆಗೆ ಯತ್ನ : ಜ. 19ರ ರಾತ್ರಿ ಹುಬ್ಬಳ್ಳಿಯಲ್ಲಿ ಕೆನರಾ ಬ್ಯಾಂಕಿನ ಶಾಖೆಯೊಂದಕ್ಕೆ ನುಗ್ಗಿ ದರೋಡೆ ಮಾಡಲು ಕಳ್ಳರು ಪ್ರಯತ್ನ ಮಾಡಿದ್ದಾರೆ. ಬ್ಯಾಂಕಿನ ಮುಂಬಾಗಿನಿಂದ ದೊಡ್ಡ ಲಾಕ್ ಕತ್ತರಿಸಿದ್ದು, ಬ್ಯಾಂಕಿನ ಗೇಟ್ ಅನ್ನೂ ಕತ್ತರಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾಕೋ ಕೆಲಸವನ್ನು ಅರ್ಧಕ್ಕೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಆದರೆ, ಈ ಘಟನೆಯನ್ನು ಮುಚ್ಚಿ ಹಾಕಲು ಬ್ಯಾಂಕಿನ ಸಿಬ್ಬಂದಿ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಜ. 20ರಂದು ಸಾರ್ವಜನಿಕರು ಬ್ಯಾಂಕ್ ಗೆ ಆಗಮಿಸುವ ಮೊದಲೇ ಕತ್ತರಿಸಲ್ಪಟ್ಟಿದ್ದ ಲಾಕ್ ಹಾಗೂ ಗೇಟ್ ನ ಕೆಲವು ಸರಪಳಿಗಳನ್ನು ವೆಲ್ಡಿಂಗ್ ಮಾಡಿಸಿದ್ದಾರೆಂದು ಹೇಳಲಾಗಿದೆ.
ಪೊಲೀಸ್ ಅಧಿಕಾರಿಗಳ ಸಭೆ : ಹುಬ್ಬಳ್ಳಿಯಲ್ಲಿ ಕಳ್ಳತನದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಜ. 20ರಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು. ಹಣಕಾಸು ಸಂಸ್ಥೆಗಳ ಭದ್ರತೆಗಾಗಿ ಕೈಗೊಳ್ಳಬೇಕಾದ ಕ್ರಮಗಳು, ಜನರಲ್ಲಿ ಜಾಗೃತಿ ಹಾಗೂ ಧೈರ್ಯ ಮೂಡಿಸುವ ಪ್ರಯತ್ನಗಳನ್ನು ಅಲ್ಲಿ ವಿವರವಾಗಿ ಚರ್ಚಿಸಲಾಯಿತು.
ಮಂಗಳೂರು ಕಳ್ಳರು ತಮಿಳುನಾಡಿನಲ್ಲಿ ಬಂಧನ : ಮಂಗಳೂರಿನ ಕೋಟೆಕಾರು ಬ್ಯಾಂಕ್ ಲೂಟಿ ಮಾಡಿದ್ದ ಡಕಾಯಿತರಲ್ಲಿ ಮೂವರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಜ. 20ರಂದು ಸುದ್ದಿಗೋಷ್ಠಿ ನಡೆಸಿದ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಈ ವಿಚಾರ ತಿಳಿಸಿದ್ದಾರೆ. ಮೂವರನ್ನು ತಮಿಳುನಾಡಿನ ತಿರುವೆಲ್ವೇನಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
Comments