ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕನಿಗೆ ಧನ್ಯವಾದ ಸಲ್ಲಿಸಿದ ಸೈಫ್ ಅಲಿ ಖಾನ್ ; ಆತನಿಗೆ ಸಿಕ್ಕ ಬಹುಮಾನ ಎಷ್ಟು...?
- ಸಂಪಾದಕೀಯ
- Jan 23
- 1 min read
ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕನಿಗೆ ಧನ್ಯವಾದ ಸಲ್ಲಿಸಿದ ಸೈಫ್ ಅಲಿ ಖಾನ್ ; ಆತನಿಗೆ ಸಿಕ್ಕ ಬಹುಮಾನ ಎಷ್ಟು...?

ಮುಂಬಯಿ: ದುಷ್ಕರ್ಮಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ವೇಳೆ ತಮ್ಮನ್ನು ಸಕಾಲಕ್ಕೆ ಆಸ್ಪತ್ರೆಗೆ ತಲುಪಸಿ ಜೀವ ಉಳಿಸಿದ ಆಟೋ ಚಾಲಕನಿಗೆ ನಟ ಸೈಫ್ ಅಲಿ ಖಾನ್ ಧನ್ಯವಾದ ಸಲ್ಲಿಸಿದ್ದು, ಫೋಟೊ ವೈರಲ್ ಆಗಿದೆ.
ಜನವರಿ 16 ರ ನಸುಕಿನಲ್ಲಿ ಮುಂಬಯಿನ ಸದ್ಗುರು ಶರಣ್' ಅಪಾರ್ಟ್‌ಮೆಂಟ್‌ನಲ್ಲಿರುವ ಸೈಫ್ ಅಲಿ ಖಾನ್ ಅವರ ಫ್ಲ್ಯಾಟ್‌ಗೆ ನುಗ್ಗಿದ್ದ ದರೋಡೆಕೋರ ಬೆನ್ನಿಗೆ ಚಾಕು ಇರಿದು ಪರಾರಿಯಾಗಿದ್ದ. ಈ ವೇಳೆ ರಕ್ತದ ಮಡುವಿನಲ್ಲಿದ್ದ ಸೈಫ್ ಅವರನ್ನು ನಸುಕಿನ 3.30ರ ಸುಮಾರಿಗೆ ಆಟೋದಲ್ಲೇ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಜನವರಿ 21 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನ ಸೈಫ್ ಅವರು ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ಕರೆಸಿಕೊಂಡು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು. ರಾಣಾ ಅವರನ್ನು ಸೈಫ್ ತಬ್ಬಿಕೊಂಡು ಧನ್ಯವಾದ ಸಲ್ಲಿಸಿದ ಚಿತ್ರಗಳು ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬಹುಮಾನ : ನಟ ಸೈಫ್ ಚಾಲಕನಿಗೆ 50,000 ರೂ. ನಗದು ಬಹುಮಾನ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸೈಫ್ ಅವರನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ದಿದ್ದಕ್ಕೆ ಭಜನ್ ಸಿಂಗ್ ರಾಣಾ ಅವರಿಗೆ ಸಂಸ್ಥೆಯೊಂದು 11 ಸಾವಿರ ರೂ., ಗಾಯಕ ಮಿಕಾ ಸಿಂಗ್ ಅವರು 1 ಲಕ್ಷ ರೂ. ಬಹುಮಾನ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿರಿಯ ಪುತ್ರ ಜೆಹ್‌ನನ್ನು ನೋಡಿಕೊಳ್ಳುತ್ತಿದ್ದ ಕೇರ್‌ಟೇಕರ್ ಮಹಿಳೆಗೂ ಬಹುಮಾನ ನೀಡಲು ಸೈಫ್ ಕುಟುಂಬ ನಿರ್ಧರಿಸಿದೆ.
ಶುಭ ಹಾರೈಸಿದೆ : ''ಆಸ್ಪತ್ರೆಗೆ ಬರುವಂತೆ ಆಹ್ವಾನ ನೀಡಿದ್ದರು. ಹೀಗಾಗಿ ಆಸ್ಪತ್ರೆಗೆ ಭೇಟಿಕೊಟ್ಟು ಸೈಫ್ ಅವರ ಆರೋಗ್ಯ ವಿಚಾರಿಸಿದೆ. ಸೈಫ್ ಕುಟುಂಬಸ್ಥರು ನನಗೆ ಥ್ಯಾಂಕ್ಯೂ ಹೇಳಿದರು. ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಶುಭ ಹಾರೈಸಿದೆ,'' ಎಂದು ರಾಣಾ ಪ್ರತಿಕ್ರಿಯಿಸಿದ್ದಾರೆ. ''ಜನವರಿ 16 ರ ನಸುಕಿನಲ್ಲಿ ಸೈಫ್ ಮನೆಮುಂದೆ ಮಹಿಳೆಯೊಬ್ಬರು ಆಟೊ ಆಟೊ ಎಂದು ಕೂಗುತ್ತಿದ್ದರು. ಅಲ್ಲೇ ಇದ್ದ ನಾನು ಹೋದೆ. ಕುರ್ತಾ-ಪೈಜಾಮ ಧರಿಸಿದ್ದ ಸೈಫ್ ಆಟೋದೊಳಗೆ ಹತ್ತಿ, ಆಸ್ಪತ್ರೆಗೆ ಹೋಗಲು ಎಷ್ಟೊತ್ತಾಗುತ್ತದೆ ಎಂದು ಕೇಳಿದರು. ಅವರು ಆಘಾತದಲ್ಲಿದ್ದರು. ರಸ್ತೆಯುದ್ದಕ್ಕೂ ನಿಧಾನವಾಗಿ ಹೋಗು ಎಂದು ಹೇಳುತ್ತಿದ್ದರು,'' ಎಂದು ರಾಣಾ ಘಟನೆಯನ್ನು ಮೆಲುಕು ಹಾಕಿದ್ದಾರೆ.
Comments