ಗಂಡನನ್ನು ಕಾಪಾಡಲು 40 ಅಡಿ ಆಳದ ಬಾವಿಗೆ ಹಾರಿದ ಮಹಿಳೆ...!
- ಸಂಪಾದಕೀಯ
- Feb 7
- 1 min read
ಗಂಡನನ್ನು ಕಾಪಾಡಲು 40 ಅಡಿ ಆಳದ ಬಾವಿಗೆ ಹಾರಿದ ಮಹಿಳೆ...!

ಕೇರಳದ ಮಹಿಳೆಯೊಬ್ಬರು ತಮ್ಮ ಪತಿ ಆಕಸ್ಮಿಕವಾಗಿ ಬಾವಿಗೆ ಬಿದ್ದಾಗ ಅವರನ್ನು ರಕ್ಷಿಸಲು 40 ಅಡಿ ಆಳದ ಬಾವಿಗೆ ಹಾರಿದ್ದಾರೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪಿರಾವೋಮ್ ಪುರಸಭೆಯ ಇಲಾಂಜಿಕ್ಕವಿಲ್‌ನಲ್ಲಿ ವಾಸಿಸುವ 64 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿ ರಮೇಶ್ ಬಾವಿಗೆ ಬಿದ್ದಿದ್ದರು. ರಮೇಶ್ ತನ್ನ ಮನೆಯ ಅಂಗಳದಲ್ಲಿರುವ ಬಾವಿಯ ಬಳಿ ಮೆಣಸು ಕೊಯ್ಯುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಅವರು ಬಾವಿಗೆ ಬಿದ್ದಿದ್ದರು. ಬಾವಿ ಸುಮಾರು 40 ಅಡಿ ಆಳದಲ್ಲಿದ್ದು, ಕೆಳಭಾಗದಲ್ಲಿ ಸುಮಾರು 5 ಅಡಿ ನೀರು ಇತ್ತು.
ಗಂಡ ಬಾವಿಗೆ ಬಿದ್ದು ಕಿರುಚಾಡುತ್ತಿರುವುದನ್ನು ಕೇಳಿದ ಅವರ 56 ವರ್ಷದ ಪತ್ನಿ ಪದ್ಮ ಮೊದಲು ಗಂಡನಿಗೆ ಮೇಲೆ ಬರಲು ಸಹಾಯ ಮಾಡಲು ಪ್ಲಾಸ್ಟಿಕ್ ಹಗ್ಗವನ್ನು ಎಸೆದರು. ಆದರೆ, ಅವರಿಗೆ ಅದನ್ನು ಹಿಡಿದುಕೊಂಡು ಮೇಲೆ ಬರಲು ಸಾಧ್ಯವಾಗಲಿಲ್ಲ. ತಕ್ಷಣ ತನ್ನ ಸಂಬಂಧಿಕರಿಗೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಲು ಹೇಳಿ, ತನ್ನ ಗಂಡ ನೀರಿನಲ್ಲಿ ಮುಳುಗದಂತೆ ತಡೆಯಲು ತಾವೇ ಬಾವಿಗೆ ಇಳಿದರು.
ಮೊದಲಿಗೆ, ಪದ್ಮ ಹಗ್ಗವನ್ನು ಬಳಸಿ ಬಾವಿಗೆ ಇಳಿಯಲು ಪ್ರಯತ್ನಿಸಿದರು. ಆದರೆ ಹಿಡಿತ ತಪ್ಪಿ, ಬಾವಿಯೊಳಗಿನ ನಾಲ್ಕನೇ ರಿಂಗ್ನಿಂದ ಕೆಳಗೆ ಬಿದ್ದರು. ಕೆಳಗೆ ಬಿದ್ದ ನಂತರ ಗಂಡ ನೀರಿನಲ್ಲಿ ಮುಳುಗದಂತೆ ನೋಡಿಕೊಂಡ ಅವರು ಗಂಡನನ್ನು ಹಿಡಿದುಕೊಂಡು ಬಾವಿಯ ಗೋಡೆಗೆ ಒರಗಿ ನಿಂತರು. ನೀರು ಕೇವಲ 5 ಅಡಿ ಇದ್ದುದರಿಂದ ಅವರ ಮುಖ ನೀರಿನಲ್ಲಿ ಮುಳುಗಲಿಲ್ಲ.
ವಿಷಯ ತಿಳಿದ ಕೂಡಲೆ ಪಿರವೋಮ್ ನಿಲಯಂನ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದರು. ಹಗ್ಗಗಳು ಮತ್ತು ಬಲೆಗಳನ್ನು ಬಳಸಿ ಇಬ್ಬರನ್ನೂ ಯಶಸ್ವಿಯಾಗಿ ಮೇಲೆತ್ತಿದರು. ಸಣ್ಣಪುಟ್ಟ ಗಾಯಗಳಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
Comments