top of page

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಲು ಕ್ಷಣಗಣನೆ ; ಹೊಸ ಅಧ್ಯಕ್ಷರ ಸ್ವಾಗತಕ್ಕೆ ಸಿಂಗಾರಗೊಂಡ ವೈಟ್‌ಹೌಸ್‌

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಲು ಕ್ಷಣಗಣನೆ ; ಹೊಸ ಅಧ್ಯಕ್ಷರ ಸ್ವಾಗತಕ್ಕೆ ಸಿಂಗಾರಗೊಂಡ ವೈಟ್‌ಹೌಸ್‌

ree

ವಾಷಿಂಗ್ಟನ್:‌ ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ. ಹೊಸ ಅಧ್ಯಕ್ಷರನ್ನು ಆದರದಿಂದ ಬರಮಾಡಿಕೊಳ್ಳಲು, ರಾಜಧಾನಿ ವಾಷಿಂಗ್ಟನ್‌ಲ್ಲಿರುವ ಶ್ವೇತಭವನ ಸಿಂಗಾರಗೊಂಡು ನಳನಳಿಸುತ್ತಿದೆ.

ಇಂದು(ಜ.20-ಸೋಮವಾರ) ರಾತ್ರಿ 10-30 (ಭಾರತೀಯ ಕಾಲಮಾನ) ಗಂಟೆಗೆ ಡೊನಾಲ್ಡ್‌ ಟ್ರಂಪ್‌ ಅವರ ಪದಗ್ರಹಣ ಸಮಾರಂಭ ನಡೆಯಲಿದ್ದು, ಜಾಗತಿಕ ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.‌ ಜೈಶಂಕರ್‌ ಮತ್ತು ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಕೂಡ, ಡೊನಾಲ್ಡ್‌ ಟ್ರಂಪ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಈಗಾಗಲೇ ಅಂಬಾನಿ ದಂಪತಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿ ಮಾಡಿದ್ದಾರೆ.

ಟ್ರಂಪ್‌ ಪದಗ್ರಹಣಕ್ಕೆ ಪೂರ್ವಭಾವಿಯಾಗಿ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ 'ವಿಕ್ಟರಿ ರ‍್ಯಾಲಿ', ಟ್ರಂಪ್‌ ಅಧ್ಯಕ್ಷತೆಯಲ್ಲಿ ಅಮೆರಿಕ ಯಾವ ರೀತಿ ಮುನ್ನಡೆಯಲಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ. 'ವಿಕ್ಟರಿ ರ‍್ಯಾಲಿ' ಉದ್ದೇಶಿಸಿ ಮಾತನಾಡಿರುವ ಟ್ರಂಪ್‌, ತಮ್ಮ ಚುನಾವಣಾ ಭಾಷಣದಲ್ಲಿ ನೀಡಿದ್ದ ಭರವಸೆಯಂತೆ ಅಮೆರಿಕದ ವಲಸೆ ನೀತಿಯನ್ನು ಬದಲಾಯಿಸುವ ಘೋಷಣೆ ಮಾಡಿದ್ದಾರೆ.

"ನಾಳೆ ಸೂರ್ಯ ಮುಳುಗುವ ಹೊತ್ತಿಗೆ ನಮ್ಮ ದೇಶದ ಮೇಲಿನ ಆಕ್ರಮಣಕ್ಕೆ ಕಡಿವಾಣ ಬಿದ್ದಿರುತ್ತದೆ.." ಎಂಬ ಟ್ರಂಪ್‌ ಹೇಳಿಕೆ, ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣವೇ ಅವರು ಏನು ಮಾಡಲಿದ್ದಾರೆ ಎಂಬುದನ್ನು ಪುಷ್ಠೀಕರಿಸಿದೆ. "ಅಮೆರಿಕ ಎದುರಿಸುತ್ತಿರುವ ಪ್ರತಿಯೊಂದು ಬಿಕ್ಕಟ್ಟನ್ನು ಸರಿಪಡಿಸಲು ನಾನು ಬದ್ಧ.." ಎಂಬ ಟ್ರಂಪ್‌ ಹೇಳಿಕೆ ಸೂಚ್ಯವಾಗಿ ಎಲ್ಲವನ್ನೂ ಅನಾವರಣಗೊಳಿಸಿದೆ.

ಕ್ಯಾಪಿಟಲ್ ಒನ್ ಅರೆನಾದಲ್ಲಿ ನಡೆದ 'ಮೇಕ್ ಅಮೆರಿಕ ಗ್ರೇಟ್ ಅಗೇನ್ ವಿಕ್ಟರಿ ರ‍್ಯಾಲಿಗೆ ಮೆರಗು ನೀಡಿದ ಟ್ರಂಪ್‌, ಚುನಾವಣಾ ಭಾಷಣಗಳಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವ ವಾಗ್ದಾನ ಮಾಡಿದ್ದಾರೆ. ಇನ್ನು ವಿಚಿತ್ರ ಎಂಬಂತೆ ಟ್ರಂಪ್‌ ಅಧಿಕಾರ ಸ್ವೀಕಾರಕ್ಕೂ ಮುನ್ನ ಅಮೆರಿಕದಲ್ಲಿ ಡಾಲರ್‌ ಬೆಲೆ ಕುಸಿತ ಕಂಡಿದ್ದು, ಬಿಟ್‌ ಕಾಯಿನ್‌ ಮೌಲ್ಯ ಸಾರ್ವಕಾಲಿಕ ಏರಿಕೆ ಕಂಡಿದೆ.

ಡೊನಾಲ್ಡ್‌ ಟ್ರಂಪ್‌ ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬೈಡನ್‌ ಕೂಡ ಭಾಗವಹಿಸಲಿದ್ದಾರೆ. ಅದೇ ರೀತಿ ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌, ಮೆಟಾ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ಸೇರಿದಂತೆ ಅಮೆರಿಕದ ಹಲವು ಪ್ರತಿಷ್ಠಿತ ವ್ಯಕ್ತಿಗಳು, ಡೊನಾಲ್ಡ್‌ ಟ್ರಂಪ್‌ ಪದಗ್ರಹಣಕ್ಕೆ ಸಾಕ್ಷಿಯಾಗಲಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10-30 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ಆರಂಭವಾಗಲಿದ್ದು, ಅಮೆರಿಕದ ಚೀಫ್‌ ಜಸ್ಟೀಸ್‌ ಜಾನ್‌ ರಾಬರ್ಟ್ಸ್‌ ಅವರು ಡೊನಾಲ್ಡ್‌ ಟ್ರಂಪ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

Comments


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page