ಅತ್ಯನ್ನತ ಕ್ರೀಡಾ ಪ್ರಶಸ್ತಿ ಸ್ವೀಕರಿಸಿದ ಮನು ಭಾಕರ್, ಗುಕೇಶ್
- ಸಂಪಾದಕೀಯ
- Jan 17
- 1 min read
ಅತ್ಯನ್ನತ ಕ್ರೀಡಾ ಪ್ರಶಸ್ತಿ ಸ್ವೀಕರಿಸಿದ ಮನು ಭಾಕರ್, ಗುಕೇಶ್

ನವದೆಹಲಿ: ಎರಡು ಒಲಿಂಪಿಕ್ ಪದಕ ವಿಜೇತೆ ಶೂಟರ್ ಮನು ಭಾಕರ್ ಮತ್ತು ವಿಶ್ವ ಚೆಸ್ ಚಾಂಪಿಯನ್ ಡಿ. ಗುಕೇಶ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ(ಜ17) ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಾರಂಭದಲ್ಲಿ ತಾರಾ ಅಥ್ಲೀಟ್‌ಗಳು ಅದ್ದೂರಿ ಸ್ವಾಗತ ಪಡೆದರು.
ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಹೈಜಂಪ್ ನಲ್ಲಿ ಚಿನ್ನದ ಪದಕ ಗೆದ್ದ ಪ್ರವೀಣ್ ಕುಮಾರ್ ಅವರಿಗೂ ರಾಷ್ಟ್ರಪತಿಗಳು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಾಲಿನಲ್ಲಿ ರಾಷ್ಟ್ರದ ಅತ್ಯುನ್ನತ ಕ್ರೀಡಾ ಗೌರವವನ್ನು ಪಡೆದ ನಾಲ್ವರು ಕ್ರೀಡಾಪಟುಗಳಲ್ಲಿ ಮನು ಭಾಕರ್ ಮತ್ತು ಡಿ.ಗುಕೇಶ್ ಸೇರಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಎರಡು ಕಂಚಿನ ಪದಕಗಳನ್ನು ಜಯಿಸಿ ಕೀರ್ತಿ ತಂದಿದ್ದರು. ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಚೆನ್ನೈನ ಡಿ.ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ. ಕಳೆದ ವರ್ಷ ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಪಂದ್ಯದಲ್ಲಿ 19 ರ ಹರೆಯದ ಗೂಕ್ಷ್ ಅವರು ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವನಾಥನ್ ಆನಂದ್ ನಂತರ ಶಾಸ್ತ್ರೀಯ ಚೆಸ್‌ನಲ್ಲಿ ಅಗ್ರ ಬಹುಮಾನ ಗೆದ್ದ ಎರಡನೇ ಭಾರತೀಯ ಎನಿಸಿಕೊಂಡರು.
32 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು, ಇದು ಭಾರತ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾಗಿದೆ. ಮೊದಲ ಬಾರಿಗೆ, ಪ್ಯಾರಾ-ಅಥ್ಲೀಟ್‌ಗಳು ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ತಮ್ಮ ಅತ್ಯಮೋಘ ಪ್ರದರ್ಶನದ ನಂತರ ಸಮರ್ಥ ಕ್ರೀಡಾಪಟುಗಳ ಸಾಧನೆ ಮೀರಿಸಿದ್ದರು.ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ 18 ನೇ ಸ್ಥಾನವನ್ನು ಗಳಿಸಿತ್ತು. ಏಳು ಚಿನ್ನದ ಪದಕಗಳು ಸೇರಿದಂತೆ 29 ಪದಕಗಳನ್ನು ತನ್ನದಾಗಿಸಿಕೊಂಡಿತ್ತು.ಅರ್ಜುನ ಪ್ರಶಸ್ತಿ ಪಡೆದ ಕ್ರೀಡಾಪಟುಗಳಲ್ಲಿ ಒಲಿಂಪಿಕ್ ಪದಕ ವಿಜೇತರಾದ ಸರಬ್ಜೋತ್ ಸಿಂಗ್ ಮತ್ತು ಸ್ವಪ್ನಿಲ್ ಕುಸಾಲೆ ಕೂಡ ಸೇರಿದ್ದಾರೆ.
Comments