"ಬಿಗ್‌ಬಾಸ್ ನಿರೂಪಕನಾಗಿ ನನ್ನ ಕೊನೆಯ ಫಿನಾಲೆ" ; ಭಾವನಾತ್ಮಕ ಪೋಸ್ಟ್ ಮಾಡಿದ ಕಿಚ್ಚ ಸುದೀಪ್
- ಸಂಪಾದಕೀಯ
- Jan 20
- 2 min read
"ಬಿಗ್‌ಬಾಸ್ ನಿರೂಪಕನಾಗಿ ನನ್ನ ಕೊನೆಯ ಫಿನಾಲೆ" ; ಭಾವನಾತ್ಮಕ ಪೋಸ್ಟ್ ಮಾಡಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಈ ಬಾರಿ ಹಲವು ಕಾರಣಗಳಿಂದ ಸದ್ದು ಮಾಡಿದೆ. ಅದಕ್ಕೆ ಒಂದು ಕಾರಣವೆಂದರೆ ಈ ಬಾರಿ ಕಿಚ್ಚ ಅವರು ಕೊನೆಯ ಬಾರಿ ಬಿಗ್ ಬಾಸ್ ಶೋವನ್ನು ನಡೆಸಿಕೊಡಲಿದ್ದಾರೆ ಎನ್ನುವುದು ಕೂಡ ಆಗಿತ್ತು.
ಬಿಗ್ ಬಾಸ್ ಕನ್ನಡ -11 ಆರಂಭವಾದ ಕೆಲ ವಾರಗಳ ಬಳಿಕ ಸುದೀಪ್ ಅವರು "ಇದು ಬಿಗ್ ಬಾಸ್ ನಿರೂಪಕನಾಗಿ ನನ್ನ ಕೊನೆಯ ಸೀಸನ್" ಎಂದು ಟ್ವೀಟ್ ಮಾಡಿದ್ದರು. ವೀಕ್ಷಕರು ಕನ್ನಡ ಬಿಗ್ ಬಾಸ್ ನೋಡುವುದಕ್ಕೆ ಒಂದು ಪ್ರಮುಖ ಕಾರಣವೇ ಕಿಚ್ಚ ಸುದೀಪ್ ಅವರು. ಆದರೆ ಅವರು ನಿರೂಪಣೆಗೆ ಗುಡ್ ಬೈ ಹೇಳುತ್ತಿರುವುದು ದೊಡ್ಡ ಶಾಕಿಂಗ್ ಸಂಗತಿ ಆಗಿತ್ತು.
ಸುದೀಪ್ ಅವರ ಬಳಿ ʼಮ್ಯಾಕ್ಸ್ʼ ಸಿನಿಮಾದ ಪ್ರಚಾರದ ವೇಳೆ ಹಲವು ಬಾರಿ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದರ ಬಗ್ಗೆಯೇ ಕೇಳಲಾಗಿತ್ತು. ಎಲ್ಲದಕ್ಕೂ ಹೊಸಬರು ಬರಲಿ ಎಂದು ಹೇಳಿ, ತಾವು ನಿರೂಪಣೆಗೆ ಮತ್ತೆ ಬರುವುದಿಲ್ಲವೆನ್ನುವ ರೀತಿಯಲ್ಲೇ ಕಿಚ್ಚ ಉತ್ತರಿಸಿದ್ದರು.
ಇದೀಗ ಈ ಬಿಗ್ ಬಾಸ್ ಕೊನೆಯ ವೀಕೆಂಡ್ ಶೋ ಮುಗಿದ ಬಳಿಕ ಸುದೀಪ್ ಅವರು ಮತ್ತೊಮ್ಮೆ ಬಿಗ್ ಬಾಸ್ ಗುಡ್ ಬೈ ಹೇಳುವ ಬಗ್ಗೆ ಟ್ವೀಟ್ ಮಾಡಿದ್ದಾರೆ.
"ಕಳೆದ 11 ಸೀಸನ್ ಬಿಗ್ ಬಾಸ್‌ನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ. ಮುಂದೆ ಬರುವ ಫಿನಾಲೆಯಲ್ಲಿ ನಾನು ಬಿಗ್ ಬಾಸ್ ನಿರೂಪಕನಾಗಿ ಕೊನೆಯ ಬಾರಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ನಿಮ್ಮೆಲ್ಲರನ್ನು ರಂಜಿಸುತ್ತೇನೆ ಎಂದು ಭಾವಿಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣ. ಅದನ್ನು ನನ್ನ ಕೈಲಾದಷ್ಟು ನಿಭಾಯಿಸಿದ್ದಕ್ಕೆ ನನಗೆ ಖುಷಿಯಾಗಿದೆ. ಈ ಅವಕಾಶ ಕೊಟ್ಟದ್ದಕ್ಕೆ ಧನ್ಯವಾದ ಕಲರ್ಸ್ ಕನ್ನಡ" ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
ಸುದೀಪ್ ಅವರು ಮತ್ತೆ ನಿರೂಪಕನಾಗಿ ಬರುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ತಾನು ಬರುವುದಿಲ್ಲವೆಂದು ಕಿಚ್ಚ ಮತ್ತೊಮ್ಮೆ ದೃಢಪಡಿಸಿದ್ದಾರೆ.
ಈ ಹಿಂದೆ ಹೇಳಿದ್ದೇನು? : “ನಾನು ಟ್ವೀಟ್ ಮಾಡಿದ ದಿನ ತುಂಬಾ ದಣಿದಿದ್ದೆ. ಆ ಸಮಯದಲ್ಲಿ ನಾನು ಟ್ವೀಟ್ ಮಾಡದಿದ್ದರೆ ಬಹುಶಃ ಮರುದಿನ ನನ್ನ ಆಲೋಚನಾ ಪ್ರಕ್ರಿಯೆ ವಿಭಿನ್ನವಾಗಿರುತ್ತಿತ್ತು. ಶೋ ಬಿಡುವ ಆಲೋಚನೆ ಬಂದ ಬಳಿಕ ಆ ಸಮಯದಲ್ಲೇ ಅದನ್ನು ಟ್ವೀಟ್ ಮಾಡಿ ಬಿಡುವುದು ಉತ್ತಮ ಎಂದು ಭಾವಿಸಿದೆ. ಅದು ನನಗೆ ನಾನೇ ಹಾಕಿಕೊಂಡ ಬದ್ಧತೆ ಆಗಿತ್ತು” ಎಂದಿದ್ದರು.
“ನನಗೆ ಬಿಗ್ ಬಾಸ್ ಹೆಚ್ಚು ಗೌರವ ತಂದುಕೊಟ್ಟಿದೆ. ಅಪಾರ ಪ್ರೀತಿಯನ್ನು ತಂದುಕೊಟ್ಟಿದೆ. ಎಲ್ಲೋ ಒಂದು ಕಡೆ ಶೂಟಿಂಗ್ ಆಗುತ್ತಿರುವಾಗ ವೀಕೆಂಡ್‌ಗೆ ಇಲ್ಲಿಗೆ ಬರಬೇಕು. ಸಾಕಷ್ಟು ಪ್ರಯಾಣ ಮಾಡಿ ಮಾಡಿ ಶುಕ್ರವಾರ ಬಂದು ಎಲ್ಲಾ ಎಪಿಸೋಡ್ ನೋಡಿ ಶೋ ನಡೆಸಿಕೊಡಬೇಕು. ಇದೊಂದು ಹೆಚ್ಚು ಪರಿಶ್ರಮದ ಕೆಲಸ. ಎಪಿಸೋಡ್ ನೋಡದೆ ನಿರೂಪಣೆ ಮಾಡುವುದು ನನಗೆ ಇಷ್ಟವಿಲ್ಲ. ಅದನ್ನು ನಾನು ಮಾಡಲು ಸಾಧ್ಯವಿಲ್ಲ. ನಾನು ಸಾಕಷ್ಟು ಪರಿಶ್ರಮ ಹಾಕುತ್ತೇನೆ. ಆದರೆ ಆ ಶ್ರಮಕ್ಕೆ ಸರಿಯಾದ ರೀತಿಯಲ್ಲಿ ಬೆಲೆಯನ್ನು ನೀಡುವವರು ಸಹ ಬೇಕು. ಅದು ಇಲ್ಲಿ ಸಾಧ್ಯವಾಗದಿದ್ದಾಗ ಆ ಶ್ರಮವನ್ನು ನಾನು ಸಿನಿಮಾದಂತಹ ಕೆಲಸಕ್ಕೆ ಹಾಕಲು ಇಷ್ಟಪಡುತ್ತೇನೆ” ಎಂದು ಹೇಳಿದ್ದರು.
ಬೇರೆಯವರು ಶೋ ನಡೆಸಿಕೊಡಬಹುದು. ಅವರು ನನಗಿಂತ ಉತ್ತಮವಾಗಿ ನಿರೂಪಣೆ ಮಾಡಬಹುದು. ನನಗಿಂತ ಬೇರೆ ಯಾರು ಸಹ ಇದನ್ನು ಚೆನ್ನಾಗಿ ಮಾಡಲ್ಲವೆಂದು ಭಾವಿಸುವವನು ನಾನಲ್ಲ. ನನಗೆ ಏನಾದರೂ ಹೇಳೋಕೆ ಇದ್ರೆ ನಾನು ನೇರವಾಗಿಯೇ ಹೇಳುತ್ತೇನೆ. ನಾನಾ ಕಾರಣ ಕೊಟ್ಟು ನನಗೆ ಕಾರ್ಡ್ಸ್ ಪ್ಲೇ ಮಾಡಲು ಬರಲ್ಲ. ನಾನು ಜನರ ಪರಿಶ್ರಮಕ್ಕೆ ಗೌರವ ಕೊಡುವ ವ್ಯಕ್ತಿಯೆಂದು” ಸುದೀಪ್ ಹೇಳಿದ್ದರು.
Comments